ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ವಿಡಿಯೋ ನೋಡಿ ಹೃದಯಾಘಾತದಿಂದ ಆರ್ ಟಿಒ ಇನ್ಸ್ಪೆಕ್ಟರ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಹರಿಬಿಟ್ಟ ವಿಡಿಯೋಗೆ ದಕ್ಷ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ .ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಗುರುವಾರ ಬೆಳಗ್ಗೆ ನಿಂತಿದ್ದ ಆಟೋಗೆ ಸಾರಿಗೆ ಇಲಾಖೆ ಇನ್ಸ್ ಪೆಕ್ಟರ್ ಕಾರು ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಆಟೊ ಚಾಲಕ ನೂರ್ ಷರೀಫ್ ಕೈ ಮುರಿತ ಗೊಂಡಿತ್ತು .ಕಾರು ಚಲಾಯಿಸುತ್ತಿದ್ದ ಇನ್ಸ್ಪೆಕ್ಟರ್ ಮಂಜುನಾಥ್(೫೨) ಅವರು ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದಾರೆ ಎಂದು ಆರೋಪಿಸಿ ಆಟೊ ಚಾಲಕ ಸೇರಿ ಸ್ಥಳದಲ್ಲಿ ನೆರೆದ ಇತರ ಆಟೊ ಚಾಲಕರು ಅಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಘರ್ಷಣೆಯ ವಾತಾವರಣವನ್ನು ನಿರ್ಮಿಸಿದ್ದರು .ಸ್ಥಳಕ್ಕೆ ಆಗಮಿಸಿದ ಸಿಆರ್ ಪಿಎಫ್ ಭದ್ರತಾ ಸಿಬ್ಬಂದಿ ಮತ್ತು ಸಂಚಾರಿ ಪೊಲೀಸರು ನೆರೆದಿದ್ದವರನ್ನು ಸಮಾಧಾನಗೊಳಿಸಿ ಪ್ರಕರಣ ದಾಖಲಿಸಿಕೊಳ್ಳುವುದಾಗಿ ತಿಳಿಸಿದ್ದರು.ಆದರೆ ಮಂಜುನಾಥ್ ಅವರು ಮದ್ಯಪಾನ ಮಾಡಿರಲಿಲ್ಲ ಲೋ ಬಿಪಿ ಪರಿಣಾಮ ವಾಹನ ಚಲಾಯಿಸುವಾಗ ಅವರಿಗೆ ಮಂಪರು ಉಂಟಾಗಿದೆ. ಈ ವೇಳೆ ಆಕಸ್ಮಿಕವಾಗಿ ಆಟೋಕ್ಕೆ ಅವರ ಕಾರು ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ .ಧೀರ್ಘಕಾಲದ ಅನಾರೋಗ್ಯದ ಕಾರಣ ವಿಶ್ರಾಂತಿಯಲ್ಲಿದ್ದ ಆರ್ಟಿಒ ಅಧಿಕಾರಿಗೆ ಕರ್ತವ್ಯಕ್ಕೆ ಮರಳುವಂತೆ ಕೋರಲಾಗಿತ್ತು.

ಈ ಹಿನ್ನೆಲೆಯಲ್ಲಿ ರಜೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಗುರುವಾರ ಕರ್ತವ್ಯಕ್ಕೆ ಬರುವ ವೇಳೆ ಈ ರೀತಿಯ ಅವಘಡ ಸಂಭವಿಸಿದೆ .ಮಂಜುನಾಥ್ ಅವರು ಮದ್ಯಪಾನ ಮಾಡದಿದ್ದರೂ ಕೆಲವು ಮಾಧ್ಯಮಗಳು ಸೇರಿ ಸಾಮಾಜಿಕ ಜಾಲತಾಣದಲ್ಲಿ ಅವರು ಮದ್ಯಪಾನ ಮಾಡಿ ಅಪಘಾತ ಮಾಡಿದ್ದಾರೆ ಎಂದು ಶೇರ್ ಮಾಡಲಾಗಿತ್ತು .ಆ ವಿಡಿಯೋಗಳನ್ನು ಮಂಜುನಾಥ್ ಅವರ ಮೊಬೈಲ್ ಗೆ ಕೂಡ ಕಿಡಿಗೇಡಿಗಳು ಕಳುಹಿಸಿದ್ದರು. ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಮಂಜುನಾಥ ಅವರು ರಕ್ತದೊತ್ತಡ ಹೆಚ್ಚಾಗಿ ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು .ಶುಕ್ರವಾರ ಸಂಜೆ ಶುಗರ್ ಮತ್ತು ರಕ್ತದೊತ್ತಡ ಏರುಪೇರಾಗಿ ಐಸಿಯುವಿನಲ್ಲಿ ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

This site uses Akismet to reduce spam. Learn how your comment data is processed.