ಸಂವಿಧಾನದಡಿ ದೇಶದ ಯಾವುದೇ ಭಾಗದಲ್ಲಾದರೂ ಪರಿಸ್ಥಿತಿಯನ್ನು ಮಾಮೂಲಿಗೆ ತರುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ :ಗೃಹ ಸಚಿವ ರಾಜನಾಥ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ : ಪಶ್ಚಿಮ ಬಂಗಾಳದಲ್ಲಿ ಪೊಲೀಸ್- ಸಿಬಿಐ ಸಂಘರ್ಷದಿಂದ ಸಂವಿಧಾನ ಭಗ್ನಗೊಳ್ಳುವ ಸಾಧ್ಯತೆಯಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.ತನಿಖಾ ಏಜೆನ್ಸಿ (ಸಿಬಿಐ)ಯ ಕರ್ತವ್ಯಕ್ಕೆ ಅಡ್ಡಿಪಡಿಸುವ ಕ್ರಮವನ್ನು ಹಿಂದೆಂದೂ ಯಾರೊಬ್ಬರು ಕೈಗೊಂಡಿರಲಿಲ್ಲ ಎಂದು ಲೋಕಸಭೆಯಲ್ಲಿ ಗದ್ದಲದ ನಡುವೆ ಅವರು ಹೇಳಿದರು.ಚಿಟ್- ಫಂಡ್ ಹಗರಣಗಳ ಬಗ್ಗೆ ಕೊಲ್ಕತ್ತಾದ ಪೊಲೀಸ್ ಕಮೀಷನರ್‌ರನ್ನು ಪ್ರಶ್ನಿಸಲು ಸಿಬಿಐ ಯತ್ನಿಸುತ್ತಿದ್ದಂತೆ ಕೇಂದ್ರ ಮತ್ತು ಮಮತಾ ಬ್ಯಾನರ್ಜಿ ನಡುವೆ ಪೂರ್ಣ ಪ್ರಮಾಣದ ಸಮರ ಘೋಷಣೆಯಾಗಿದೆ.

`ಕೊಲ್ಕತ್ತಾ ಪೊಲೀಸ್ ಕಮೀಷನರ್‌ರನ್ನು ಪ್ರಶ್ನಿಸಲು ಹೋದ ಸಿಬಿಐ ತಂಡದ ವಿರುದ್ಧ ಹಿಂದೆಂದೂ ಇಲ್ಲದಂತಹ ಕ್ರಮ ಕೈಗೊಂಡಿದ್ದು ಇದು ದೇಶದ ರಾಜಕೀಯ ಒಕ್ಕೂಟ ವ್ಯವಸ್ಥೆಗೆ ಒಡ್ಡಿದ ಬೆದರಿಕೆ ಎಂದು ಕೊಲ್ಕತ್ತಾದಲ್ಲಿನ ಈಗಿನ ಸ್ಥಿತಿಯ ಬಗ್ಗೆ ಲೋಕಸಭೆಯಲ್ಲಿ ಹೇಳಿಕೆ ನೀಡುತ್ತಾ ರಾಜನಾಥ್ ಹೇಳಿದರು.ಪಶ್ಚಿಮ ಬಂಗಾಳದಲ್ಲಿ ಸಂವಿಧಾನ ಭಗ್ನಗೊಳ್ಳಬಹುದು… ಸಂವಿಧಾನದಡಿ ದೇಶದ ಯಾವುದೇ ಭಾಗದಲ್ಲಾದರೂ ಪರಿಸ್ಥಿತಿಯನ್ನು ಮಾಮೂಲಿಗೆ ತರುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ` ಎಂದವರು ಹೇಳಿದರು.ಇದಕ್ಕೆ ಮುನ್ನ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದು `ರಾಜಕೀಯ ಪ್ರತಿಸ್ಪರ್ಧಿಗಳ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳನ್ನು ಛೂ ಬಿಡಲಾಗುತ್ತಿದ್ದು ಇದು ಪ್ರಜಾಸತ್ತಾತ್ಮಕ ನೀತಿಗಳಿಗೆ ವಿರುದ್ಧ` ಎಂದಿದ್ದವು.

Leave a Reply

This site uses Akismet to reduce spam. Learn how your comment data is processed.