Connect with us

ಯುವ ಬರಹಗಾರರ ವೇದಿಕೆ

ಸೇಡಿಗಾಗಿ 21 ವರ್ಷ ಕಾದಿದ್ದ ಕ್ರಾಂತಿಕಾರಿ,ಮಾರ್ಚ್ 13, 1940 ರಂದು ಮುಗ್ಧ ಭಾರತೀಯರ ನರಮೇಧಕ್ಕೆ ಕಾರಣನಾದ ಬ್ರಿಟಿಷನ್ನು ಕೊಂದೇಬಿಟ್ಟ !

ಈ ಸುದ್ದಿಯನ್ನು ಶೇರ್ ಮಾಡಿ

ಮಾರ್ಚ್ 13, 1940. ಲಂಡನ್​ನ ಕಾಕ್ಸ್​ಟನ್ ಹಾಲ್. ಈಸ್ಟ್ ಇಂಡಿಯಾ ಅಸೋಸಿಯೇಷನ್ ಮತ್ತು ರಾಯಲ್ ಸೆಂಟ್ರಲ್ ಏಷಿಯಾ ಸೊಸೈಟಿಯ ಸಂಯುಕ್ತ ಆಶ್ರಯದಲ್ಲಿ ಸಭೆ ನಡೆದಿತ್ತು. ಬ್ರಿಗೇಡಿಯರ್ ಜನರಲ್ ಸರ್ ಪಿ. ಸ್ಕೈಸ್ ಪ್ರಸ್ತುತ ಜಗತ್ತಿನ ವಿದ್ಯಮಾನಗಳ ಕುರಿತು ಮಾತನಾಡುತ್ತಿದ್ದರು. ಅನೇಕ ಗಣ್ಯರು ಅಲ್ಲಿದ್ದರು. ಅಂದು ಓರ್ವ ಪ್ರಮುಖನ ಭಾಷಣ ಮತ್ತು ಸನ್ಮಾನವಿತ್ತು. ಆತ ಭಾರತದಲ್ಲಿನ ತನ್ನ ಸೇವೆಯ ಅವಧಿಯ ಸಾಧನೆಗಳನ್ನು ಕುರಿತು ಮಾತನಾಡಿದ. ಕಾರ್ಯಕ್ರಮದ ನಂತರ ಜನರು ಹೊರನಡೆಯತೊಡಗಿದರು. ಆ ಪ್ರಮುಖನೂ ಹೊರಟ. ಇದ್ದಕ್ಕಿದ್ದಂತೆಯೇ ಅವನಿಂದ ಸುಮಾರು ಮೂರು ಗಜಗಳಷ್ಟು ಅಂತರದಲ್ಲಿದ್ದ ಯುವಕನೋರ್ವ ಮಿಂಚಿನವೇಗದಲ್ಲಿ ಅವನೆದುರಾಗಿ ನಿಂತು ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಿದ.

ಅಲ್ಲಿ ಶವವಾಗಿ ಬಿದ್ದವನು 1919ರಲ್ಲಿ ಭಾರತದಲ್ಲಿ ನಡೆದ ಜಲಿಯನ್​ವಾಲಾ ಬಾಗ್​ನ ಹತ್ಯಾಕಾಂಡವನ್ನು ಸಮರ್ಥಿಸಿಕೊಂಡಿದ್ದ, ಆಗ ಪಂಜಾಬಿನ ಲೆಫ್ಟಿನಂಟ್ ಗವರ್ನರ್ ಆಗಿದ್ದ ಸರ್ ಮೈಕಲ್ ಓ’ ಡಯರ್. ಅವನನ್ನು ಹತ್ಯೆ ಮಾಡಿದ ಆ ಯುವಕ ಜಲಿಯನ್​ವಾಲಾ ಬಾಗ್ ಘಟನೆಯನ್ನು ಕಣ್ಣಾರೆ ಕಂಡು ಸೇಡಿಗಾಗಿ ಹಾತೊರೆದಿದ್ದ ಕ್ರಾಂತಿಕಾರಿ ಸರ್ದಾರ್ ಉಧಮ್ ಸಿಂಗ್.

ಪಂಜಾಬಿನ ಸಂಗ್ರೂರ್ ಜಿಲ್ಲೆಯ ಸುನಮ್ ಎನ್ನುವ ಊರಿನಲ್ಲಿ 1899ರ ಡಿ.26ರಂದು ಜನಿಸಿದ ಉಧಮ್ ಸಿಂಗ್ ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡಿದ್ದ. ಉಧಮ್ ಮತ್ತು ಅವನ ಸಹೋದರನನ್ನು ಅಮೃತಸರದ ಅನಾಥಾಲಯವೊಂದರಲ್ಲಿ ಇರಿಸಲಾಯಿತು. ಮೆಟ್ರಿಕ್ ಪರೀಕ್ಷೆಯ ನಂತರದಲ್ಲಿ ಇಂಜಿನೀಯರಿಂಗ್ ಪದವಿ ಪಡೆದಿದ್ದ.

1900 ನಂತರ ದಿನಗಳಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ತೀವ್ರವಾಗಿತ್ತು. ಭಾರತದ ಕ್ರಾಂತಿಕಾರಿಗಳ ಚಟುವಟಿಕೆಗಳು ಬ್ರಿಟಿಷರಿಗೆ ಆತಂಕ ಹುಟ್ಟಿಸುತ್ತಿದ್ದವು. ಲಂಡನ್ನಿನಲ್ಲಿ ಭಾರತೀಯ ಕ್ರಾಂತಿಕಾರಿ ಮದನ್ ಲಾಲ್ ಧಿಂಗ್ರಾನಿಂದ ಬ್ರಿಟಿಷ್ ಅಧಿಕಾರಿಯೊಬ್ಬನ ಹತ್ಯೆಯಾಗಿತ್ತು. ಭಾರತದಲ್ಲಿನ ಹೋರಾಟಗಾರರ ಚಲನವಲನಗಳ ಮೇಲೆ ಬ್ರಿಟಿಷರು ಹೆಚ್ಚಿನ ಗಮನವಿರಿಸಿದರು. ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ರೌಲೆಟ್ ಪ್ರಸ್ತಾವನೆಯನ್ನು ಜಾರಿಗೊಳಿಸಲು ಬ್ರಿಟಿಷ್ ಸರ್ಕಾರ ಅಣಿಯಾಯಿತು. ಇದು ಭಾರತೀಯರ ಪ್ರತಿಭಟನೆಗೆ ಕಾರಣವಾಯಿತು. ದೆಹಲಿ ಮತ್ತು ಪಂಜಾಬಿನಲ್ಲಿ ಒಂದೆಡೆ ಸತ್ಯಾಗ್ರಹ ಮತ್ತೊಂದೆಡೆ ಪ್ರತಿಭಟನೆ ನಡೆಯುತ್ತಿತ್ತು. ಅಮೃತಸರದಲ್ಲಿ ಬೃಹತ್ ಮೆರವಣಿಗೆ ನಡೆದಿತ್ತು. ಅಲ್ಲಿ ರೆಜಿನಾಲ್ಡ್ ಡಯರ್ ಕ್ರಾಂತಿಕಾರಿಗಳ ಮತ್ತು ಹೋರಾಟಗಾರರ ನಿಯಂತ್ರಣದ ಜವಾಬ್ದಾರಿಯನ್ನು ಹೊತ್ತಿದ್ದ.

1919ರ ಏಪ್ರಿಲ್ 13ರಂದು ಜಲಿಯನ್​ವಾಲಾ ಬಾಗ್ ಉದ್ಯಾನದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಮುಂದಿನ ಯೋಜನೆಗಳು, ರೌಲೆಟ್ ಪ್ರಸ್ತಾವನೆ ಮತ್ತಿತರ ಸಂಗತಿಗಳ ಬಗ್ಗೆ ರ್ಚಚಿಸಲು ಪಂಜಾಬಿನ 25,000 ನಾಗರಿಕರು ಶಾಂತರೀತಿಯಲ್ಲಿ ಸಭೆ ಸೇರಿದ್ದರು. ಆಗಲೇ ಅನಿರೀಕ್ಷಿತ ಘಟನೆ ನಡೆಯಿತು. ಕೇವಲ 15 ನಿಮಿಷಗಳಲ್ಲಿ ಜನರಲ್ ಡಯರ್​ನ ಆಜ್ಞೆಯಂತೆ 1650 ಗುಂಡುಗಳನ್ನು ಹಾರಿಸಲಾಯಿತು. ಹಿರಿಯರು, ಹೆಂಗಸರು ಮಕ್ಕಳೆನ್ನುವ ಭೇದವಿಲ್ಲದೆ ಸಾವಿರಾರು ಜನರು ಸ್ಥಳದಲ್ಲೇ ಸತ್ತರು. ಸಾವಿರಾರು ಮಂದಿ ಗಾಯಗೊಂಡರು. ಜನರು ತಪ್ಪಿಸಿಕೊಳ್ಳಲಾಗದಂತೆ ಎಲ್ಲಾ ದ್ವಾರಗಳನ್ನೂ ಮುಚ್ಚಲಾಗಿತ್ತು. ಆ ಸಮಯದಲ್ಲಿ ಉಧಮ್ ಸಿಂಗ್ ತನ್ನ ಅನಾಥಾಲಯದ ಸ್ನೇಹಿತರೊಂದಿಗೆ ಆ ಸಭೆಯಲ್ಲಿದ್ದವರಿಗೆ ನೀರನ್ನು ಸರಬರಾಜು ಮಾಡುತ್ತಿದ್ದ. ಆ ಪೈಶಾಚಿಕ ಕೃತ್ಯ ಕಂಡು ಮರುಗಿದ. ಬ್ರಿಟಿಷರ ವಿರುದ್ಧ ಸೇಡನ್ನು ತೀರಿಸಿಕೊಳ್ಳಲು ಅಂದೇ ಪಣ ತೊಟ್ಟ.

ಸಾವಿರಾರು ಮುಗ್ಧರ ಹತ್ಯೆಗೆ ಕಾರಣರಾದ ಅಧಿಕಾರಿ ಮೇಲೆ ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ, ಬದಲಿಗೆ ಅವನನ್ನು ಲಂಡನ್ನಿಗೆ ಉನ್ನತ ಹುದ್ದೆಯ ಮೇರೆಗೆ ಕಳುಹಿಸಲಾಯಿತು. ಈ ಎಲ್ಲಾ ಘಟನೆಗಳು ಉಧಮ್ ಸೇಡಿನ ಸಂಕಲ್ಪವನ್ನು ಇನ್ನಷ್ಟು ಬಲಗೊಳಿಸಿತು. ಈ ಉದ್ದೇಶಸಾಧನೆಗಾಗಿ ಲಂಡನ್ ತಲುಪಲು ಯೋಚಿಸಿದ. ಆದರೆ ಅವನಲ್ಲಿ ಹಣವಿರಲಿಲ್ಲ. ತನಗೆ ಗೊತ್ತಿದ್ದ ಮರಗೆಲಸದ ಕಲೆಯಿಂದ ವಿದೇಶಕ್ಕೆ ಹೋಗಲು ಹಣ ಸಂಪಾದಿಸಿದ. 1920ರಲ್ಲಿ ಮೊದಲು ದಕ್ಷಿಣ ಆಫ್ರಿಕಾ ಸೇರಿ, ಅಲ್ಲಿ ರೈಲ್ವೇ ಕಾರ್ವಿುಕನಾಗಿ ದುಡಿದು ನಂತರ ಅಮೆರಿಕ ತಲುಪಿದ. ಹಡಗುಗಳಲ್ಲಿ ಬಡಗಿಯಾಗಿ ಕೆಲಸ ನಿರ್ವಹಿಸಿದ. ಪಂಜಾಬಿನ ಗದಾರ್ ಕ್ರಾಂತಿಕಾರಿಗಳ ನೆರವಿನಿಂದ ಪೋಲ್ಯಾಂಡ್, ಜರ್ಮನಿ, ಹಾಲೆಂಡ್, ಇಟಲಿ ದೇಶಗಳಲ್ಲಿ ತಿರುಗಿ ಕೊನೆಗೆ 1933ರಲ್ಲಿ ಲಂಡನ್ ತಲುಪಿದ.

ತನ್ನ ಹೆಸರು ಮತ್ತು ವೇಷಭೂಷಣಗಳನ್ನು ಬದಲಿಸಿಕೊಂಡು ಯಾರಿಗೂ ಅನುಮಾನ ಬರದಂತೆ ಲಂಡನ್ನಿನಲ್ಲಿ ಹೋಟೆಲುಗಳಲ್ಲಿ ದುಡಿದು ಪಿಸ್ತೂಲು ಕೊಳ್ಳಲು ಹೇಗೋ ಹಣ ಹೊಂದಿಸಿಕೊಂಡ. ಇದರೊಂದಿಗೆ ನಾಟಕ ಕಲೆಯೂ ಗೊತ್ತಿದ್ದುದರಿಂದ ನಾಟಕಗಳಲ್ಲಿ ಪಾತ್ರ ವಹಿಸಿ ಕೊಂಚ ಹಣ ಸಂಪಾದಿಸಿದ.

ಮುಂದೆ ಅವನ ಕನಸು ನನಸಾಗುವ ದಿನ ಬಂತು. ಲಂಡನ್ನಿನ ಕಿಂಗ್ಸಟನ್ ಹಾಲ್​ನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮೈಕಲ್ ಡಯರ್ ಭಾಗವಹಿಸುವನೆಂಬ ಮಾಹಿತಿ ಬಂತು. ಯೋಜನೆ ಸಿದ್ಧವಾಯಿತು. ತನ್ನ ಉದ್ದೇಶಕ್ಕಾಗಿ ಅವನು ಕಾದದ್ದು ಬರೋಬ್ಬರಿ 21 ವರ್ಷಗಳು. ಮೈಕಲ್ ಡಯರ್​ನನ್ನು ಹತ್ಯೆಮಾಡಿದ ಉಧಮ್ ಸಿಂಗ್ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ಮಾಡದೆ ತಾನಾಗಿಯೇ ಕೈಸೆರೆಯಾದ. ಅವನನ್ನು ಬ್ರಿಕ್ಸ್​ಟನ್ ಜೈಲಿನಲ್ಲಿರಿಸಲಾಯಿತು. ಜೂನ್ 5ರಂದು ಅವನ ಅಂತಿಮ ಹೇಳಿಕೆಯನ್ನು ಪಡೆಯಲಾಯಿತು. ತನ್ನ ಕೃತ್ಯವೇನಿದ್ದರೂ ಮುಗ್ಧ ಭಾರತೀಯರ ನರಮೇಧಕ್ಕೆ ಕಾರಣನಾದ ಪೈಶಾಚಿಕ ಮನಸ್ಥಿತಿಯ ಡಯರ್ ಮತ್ತು ಭಾರತವನ್ನು ಗುಲಾಮಗಿರಿಗೆ ತಳ್ಳಿ ದೌರ್ಜನ್ಯವೆಸಗುತ್ತಿದ್ದ ಬ್ರಿಟಿಷ್ ಆಡಳಿತದ ವಿರುದ್ಧ ಎಂದು ಅವನು ಪ್ರತಿಪಾದಿಸಿದ. 1940ರ ಜುಲೈ 31ರಂದು 30 ವರ್ಷಗಳ ಹಿಂದೆ ಮದನ್ ಲಾಲ್ ಧಿಂಗ್ರಾನನ್ನು ಗಲ್ಲಿಗೇರಿಸಿದ್ದ ಪೆಂಟೋವಿಲ್ಲೇ ಸೆರೆಮನೆಯಲ್ಲಿಯೇ ಉಧಮ್ ಸಿಂಗ್​ನನ್ನು ಗಲ್ಲಿಗೇರಿಸಲಾಯಿತು.

ಮಯೂರಲಕ್ಷ್ಮೀ
(ಲೇಖಕರು ಉಪನ್ಯಾಸಕರು)

Continue Reading
You may also like...
Click to comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

More in ಯುವ ಬರಹಗಾರರ ವೇದಿಕೆ

To Top